ನಮಗೆ ಬೇಕಿದೆ ದೇಶ ನಡೆಸುವವ ಬೇಡವು ನಮಗೆ ನಾಮ್ಮನಾಳುವವ

ನಮಗೆ ಬೇಕಿದೆ ದೇಶ ನಡೆಸುವವ ಬೇಡವು ನಮಗೆ ನಾಮ್ಮನಾಳುವವ
ನಮಗೆ ಬೇಕಿದೆ ದೇಶ ನಡೆಸುವವ ಬೇಡವು ನಮಗೆ ನಾಮ್ಮನಾಳುವವ

ಅಸಮಾಧಾನವು ನನ್ನ ಕಾಡುತಿರೆ ನನ್ನನು ನಾನೇ ಪ್ರಶ್ನಿಸುತ್ತಿರುವೆ
ಆಲೋಚನೆಯ ಶಕ್ತಿಯ ಒಪ್ಪಿಸಿ ನನ್ನ ಬುದ್ಧಿಯನು ನಾ ಮಾರಿರುವೆ
ನನ್ನ ಕಣ್ಣುಗಳ ಅವರಿಗೆ ಕೊಟ್ಟು ಅವರ ನೋಟದ ಗುಲಾಮನಾಗಲೆ ?
ನನ್ನ ನಂಬಿಕೆಯ ಸೂತ್ರವ ಕೊಟ್ಟು ನನ್ನ ಗಾಳಿಪಟ ಅವರು ಹಿಡಿಯಲೆ ?
ನಮಗೆ ಬೇಕಿದೆ ದೇಶ ನಡೆಸುವವ ಬೇಡವು ನಮಗೆ ನಾಮ್ಮನಾಳುವವ

ನನ್ನ ಎದೆಗೂಡು ಅವರಿಗೆ ನೀಡಿ ಅವರ ಉಸಿರಲಿ ನಾನು ಬದುಕಲೇ ?
ನನ್ನ ದೇಹವ ಒಪ್ಪಿಸಿ ಅವರಿಗೆ ಅವರ ರಕ್ತವು ನನ್ನ ತುಂಬಲೇ ?
ನನ್ನ ಮನಸನು ಅವರಿಗೆ ಕೊಟ್ಟು ಅವರ ಯೋಚನೆ ನಾನು ಮಾಡಲೇ ?
ಮತಿಹೀನನಾಗಿ ತಿಲಕವನಿಟ್ಟು ಹಿಂಡು ಕಟ್ಟುತ ಬೀದಿಗಿಳಿಯಲೆ ?
ನಮಗೆ ಬೇಕಿದೆ ದೇಶ ನಡೆಸುವವ ಬೇಡವು ನಮಗೆ ನಾಮ್ಮನಾಳುವವ

ಸಂವಿಧಾನಗಳ ಸಂಹಿತೆಯನ್ನು ಸ್ವಾರ್ಥ ಕೆಲಸಕೆ ಬಳಕೆ ಮಾಡುತಲಿ
ಬಿತ್ತಿ  ಚಿತ್ರಗಳ ಮುಕ್ತ  ಪ್ರದರ್ಶಿಸಿ ಮತಯಾಚಿಸುವುದು ಸರಿಯಲ್ಲ
ವಿತಂಡ ವಾದವ ಭಂಡದಿ ಮಂಡಿಸಿ ಸುಳ್ಳು ಕೆಲಸ ಸಮರ್ಥಿಸಿಕೊಳ್ಳುತ
ಜನಸೇವಕರ ರೂಪವ ಹೊತ್ತಿಹ ಗೋಮುಖ ವ್ಯಾಘ್ರರು ಬೇಕಿಲ್ಲ
ನಮಗೆ ಬೇಕಿದೆ ದೇಶ ನಡೆಸುವವ ಬೇಡವು ನಮಗೆ ನಾಮ್ಮನಾಳುವವ

ಬ್ರಾಹ್ಮಣ, ಕ್ಷತ್ರಿಯ, ವೈಶ್ಯ, ಶೂದ್ರ ಇವರೆಲ್ಲರೂ ಹಿಂದೂ ಜನ್ಮಜರಂತೆ
ಕ್ರೈಸ್ತ, ಮಹಮದಿಯ, ಬೌದ್ಧ, ಪಾರಸಿಗ ಹಿಂದೂ ಮತಕ್ಕೆ ಶತ್ರುಗಳಂತೆ
ಸಂಪ್ರದಾಯ ಸರ್ವೋತ್ತಮವೆಂದೆನ್ನುತ ವಿವಿಧತೆಯನ್ನು ಖಂಡಿಸುವಿವಿರಿ
ಸಾಟಿಯಿಲ್ಲ ಅನ್ಯರು ತಮಗೆಂದು ತಮ್ಮ ಮತವೆ ಮಿಗಿಲೆಂದು ಸಾರುವಿರಿ
ನಮಗೆ ಬೇಕಿದೆ ದೇಶ ನಡೆಸುವವ ಬೇಡವು ನಮಗೆ ನಾಮ್ಮನಾಳುವವ

ದೇವರ ಹೆಸರಲಿ ಸಮಾಜ ಒಡೆಯುತ ಹಿಂದ-ಅಹಿಂದದ ದ್ವೇಷ ಬಿತ್ತುತಿಹ
ಮುಗ್ಧ ಹನುಮನ ಮನಸ ತಿಳಿಯದ ಸರ್ವಕಾಲಕ್ಕೂ ನೀವೇ ಶ್ರೇಷ್ಠರು
ದಯೆಯೇ ಧರ್ಮದ ಮೂಲವು ಎಂದು ಶರಣ ಜಂಗಮರು ಸಾರಿ ನುಡಿದರು
ಸನಾತನ ಕೇಸರಿ ಧರ್ಮದರ್ಥದಲಿ ಭಯವ ಬಿತ್ತುತ ಸಾರುತಲಿಹರು
ನಮಗೆ ಬೇಕಿದೆ ದೇಶ ನಡೆಸುವವ ಬೇಡವು ನಮಗೆ ನಾಮ್ಮನಾಳುವವ

ಪತ್ರಕರ್ತರು ಪ್ರಶ್ನೆ ಕೇಳಿದರೆ ನಿಮ್ಮ ಉತ್ತರ ಅವರ ಕಗ್ಗೊಲೆ
ದೃಶ್ಯ-ಮಾಧ್ಯಮವು ಕೈಜೋಡಿಸಿವೆ ತೊಟ್ಟುನಿಂತಿವೆ ಕೈ ಸಂಕೋಲೆ
ಬುದ್ದಿ ಜೀವಿಗಳು ಮಾತನಾಡಿದರೆ ನಿಮಗವರೆಲ್ಲರು ದೇಶಭ್ರಷ್ಠರು
ನಿಮ್ಮ ಮಾತನು ಒಪ್ಪಿದ ಪ್ರಜೆಗಳು ಜಗದಲ್ಲೇ ಸರ್ವ ಶ್ರೇಷ್ಠರು
ನಮಗೆ ಬೇಕಿದೆ ದೇಶ ನಡೆಸುವವ ಬೇಡವು ನಮಗೆ ನಾಮ್ಮನಾಳುವವ

ಪುಟ್ಟ ಮಕ್ಕಳಿಗೆ ಏನು ಹೇಳುವಿರಿ? ಹಿಂದು ಇವರು ಸರಿ, ಅವರು ಅಹಿಂದ ?
ನಮ್ಮ ಮತಕಷ್ಟೆ ದೇಶಭಕ್ತಿಯಿದೆ ಇಲ್ಲ ಬೇರೆ ಮತದಲಾನಂದ
ಗೋವಿನ ಪೂಜೆ ಮಾಡುವರಷ್ಟೇ ಭಾರತದಲಿ ಬದುಕಿರಲರ್ಹರು
ಬೇರೆ ದೇಶದಲಿ ಬದುಕಿರಬೇಕು ಬೇರೆ ದೇವರನು ನಂಬುವರೆಲ್ಲರು
ನಮಗೆ ಬೇಕಿದೆ ದೇಶ ನಡೆಸುವವ ಬೇಡವು ನಮಗೆ ನಾಮ್ಮನಾಳುವವ

ದೇಶ ಭಕ್ತಿಯ ಕೊಂದ ಜನರಿವರು, ದೇಶವ ಕುರಿತು ಭಾಷಣ ಬಿಗಿವರು
ಸುಳ್ಳು ತಟವಟದ ನಾಲಿಗೆ ಚಾಚಿ  ಧರ್ಮ ಅಧರ್ಮದ ಮಾತನಾಡುವರು
ಕಮಲಕೆ ತಾಕದೆ ಸೂರ್ಯನ ಬಿಸಿಲು ತಾವರೆಗಿಲ್ಲವೆ ನೀರಿನ ಭಯವು
ಸೂರ್ಯ ಮುನಿದರೆ ನೀರು ಬತ್ತುವುದು, ಸೊರಗಿ ಸಾಯುವುದು ಬಾಡಿ ಕಮಲವು
ನಮಗೆ ಬೇಕಿದೆ ದೇಶ ನಡೆಸುವವ ಬೇಡವು ನಮಗೆ ನಾಮ್ಮನಾಳುವವ

VN:F [1.9.22_1171]
Rating: 5.0/5 (1 vote cast)
ನಮಗೆ ಬೇಕಿದೆ ದೇಶ ನಡೆಸುವವ ಬೇಡವು ನಮಗೆ ನಾಮ್ಮನಾಳುವವ, 5.0 out of 5 based on 1 rating